Sunday, August 27, 2006

ಕನ್ನಡ ಬೇಗರಣ ಕಟ್ಟಳೆಗಳು

ಈ ಕೆಳಗಿನ ಇಚಾರವನ್ನು, ದಯಮಾಡಿ ಗಮನವಿಟ್ಟು ಓದಿರಿ, ಇದರಲ್ಲಿ ತಪ್ಪು ಕಂಡರೆ, ತಿಳಿಸಿ.
ಕನ್ನಡದ ನಿಜ ಅಕ್ಕರಪಟ್ಟಿ :-
ದನಿಗಳು :- ಅ,ಆ,ಇ,ಈ,ಉ,ಊ,ಎ,ಏ,ಐ,ಒ,ಓ,ಔ,ಅಂ
ಬೆಂಜನಗಳು :-
ಕ, ಗ, ಙ
ಚ, ಜ, ಞ
ಟ, ಡ, ಣ
ತ, ದ, ನ
ಪ, ಬ, ಮ
ಯ, ರ, ಲ, ವ, ಸ, ಹ, ಳ
ಕಟ್ಟಳೆಗಳು
ಒತ್ತಕ್ಕರ ಕಟ್ಟಳೆ :- ಒತ್ತು+ಅಕ್ಕರ ( ಒತ್ತು ಅಕ್ಷರ ). ಅಂದರೆ ಕನ್ನಡದಲ್ಲಿ ಒಂದು ಅಕ್ಕರವನ್ನು ಒತ್ತಿ ಹೇಳುವದನ್ನು, ಬರೆಯುವಾಗ, ಆ ಅಕ್ಕರದ ಕೆಳಗೆ ಅದೇ ಅಕ್ಕರವನ್ನು ಬರೆಯಲಾಗುತ್ತದೆ.
ಉದಾ: ಕಲ್ಲು, ಮುಳ್ಳು, ಸುಳ್ಳು, ಅಕ್ಕರೆ, ಸಕ್ಕರೆ, ಅಗ್ಗ, ಹಿಗ್ಗು, ಸುಗ್ಗಿ, ನುಗ್ಗು, ಪಕ್ಕ, ಚುಕ್ಕ ಹೀಗೆ ಹಲವಾರು.ಪೊಳ್ಳು, ಗೊಳ್ಳು, ಗೊಡ್ಡು, ಮುತ್ತು, ಸುತ್ತು, ತುತ್ತು, ಕತ್ತು, ಕುತ್ತು, ಸೊತ್ತು. ಬಹಳ ಇವೆ.
ಕಟ್ಟಳೆಯ ಉಲ್ಲಂಗನೆ :- ಒತ್ತಕ್ಕರ ಎಂಬ ಪದದಲ್ಲಿಯೇ 'ಒತ್ತು' ಇದೆ. ಅಂದರೆ ಆ ಅಕ್ಕರವನ್ನು ಒತ್ತಿ ಹೇಳುವುದು. ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರವನ್ನು ಬರೆದರೆ(ಉದಾ: ಪ್ರ), ಅದು ಬೆರಕೆಯಾಗುತ್ತದೆ, ಒತ್ತಕ್ಕರ ಹೇಗಾಗುತ್ತದೆ? ಇದರಲ್ಲಿ ತಪ್ಪಿದ್ದಲ್ಲಿ ತಿಳಿಸಿ.
ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರ ಇರುವ ಪದಗಳೆಲ್ಲವೂ ಹೊರಗಿನವೇ ಆಗಿವೆ. ಉದಾ: ಪತ್ರ, ಚಿತ್ರ, ಪಾತ್ರ, ವಿನಮ್ರ, ವಿಕ್ರಮ, ವಿಕ್ರಯ, ಹೀಗೆ ಬಹಳ ಪದಗಳು. ಈ ಪದಗಳು ಕನ್ನಡಿಗರಿಗೆ ಹೊಂದಿಲ್ಲ. ಟಪಾಲು, ಕಾಗದ(ಕಾಗಜ್ ನಿಂದ ಬಂದದ್ದು), ಇಂತವು ಹೊರಗಿನವಾದರೂ ಒತ್ತಕ್ಕರದ ಕಟ್ಟಳೆ ಕಾಪಾಡುವದರಿಂದ ಅವು ಬಲು ಬೇಗ ಕನ್ನಡದ ಪದಗಳಾಗಿವೆ.
ಒಂದು ಉದಾಹರಣೆ: ಡಾ.ರಾಜಣ್ಣರ 'ಬಂಗಾರದ ಪಂಜರ' ಸಿನಿಮಾ ನೀವು ಒಮ್ಮೆ ನೋಡಿರಿ, ಅದರಲ್ಲಿ ಬರುವ ಒಂದು ಸೀನಿನಲ್ಲಿ, ಬೀರ(ರಾಜಣ್ಣ) ಅವನ ತಮ್ಮನ ಜೊತೆ 'ಕ್ಲಬ್' ಗೆ ಹೋಗಿರುತ್ತಾನೆ. ಮರುದಿನ ಅವರ ಅಪ್ಪ(ಲೋಕನಾತ್) 'ನಿನ್ನೆ ರಾತ್ರಿ ಎಲ್ಲಿಗೆ ಹೋಗಿದ್ದೆ' ಅಂತ ಕೇಳುತ್ತಾನೆ, ಅದಕ್ಕೆ ಬೀರ " ದಾಡಿ(ಡ್ಯಾಡಿ) ನಾನು, 'ಕಿಲುಬಿ'ಗೆ ಹೋಗಿದ್ದೆ " ಅನ್ನುತಾನೆ. 'ಅಶಿಕ್ಷಿತನಾದ' ಬೀರ 'ಕ್ಲಬ್' ನ್ನು ಕಿಲುಬು ಮಾಡಿ ತನ್ನ ಪದವಾಗಿಸಿಕೊಳ್ಳುತ್ತಾನೆ. 'ಸುಶಿಕ್ಷಿತನಾದ' ಅವರ ಅಪ್ಪ ಅದನ್ನು 'ಕ್ಲಬ್' ಎಂದು ತಿದ್ದುತ್ತಾನೆ. :-(
'I was born intelligent, but education ruined me' ಅಂತಾರಲ್ಲ ಹಾಗೆ.
'ಕ್ಲಬ್' ಎಂದು ಬರೆಯುವಲ್ಲಿ ಒತ್ತಕ್ಕರದ ಕಟ್ಟಳೆ ಉಲ್ಲಂಗನೆಯಾಗುವದರಿಂದ ಅದು ಹೊರಗಿನ ಪದವಾಗೇ ಉಳಿಯುತ್ತದೆ. ಅದು 'ಕಲಬು' ಆದರೆ ಅಲಗು, ಮುಲುಕು, ಮೆಲುಕು ಹೀಗೆ ಹಲವಾರು ಪದಗಳಂತೆಯೇ ಇರುವದರಿಂದ ಬಹು ಬೇಗ ಕನ್ನಡ ಪದವಾಗುತ್ತದೆ.
ಹೀಗೆ, ಒಂದು ಅಕ್ಕರದಡಿ ಇನ್ನೊಂದು ಅಕ್ಕರ ಬರುವ ಯಾವುದೇ ಪದ ತೆಗೆದುಕೊಳ್ಳಿ, ಅದನ್ನವರು ನಿಯಮಾನುಸಾರ ತಿದ್ದಿಯೇ ಆಡುತ್ತಾರೆ. ಉದಾ; ಬರಹದಲ್ಲಿ ಬಹಳ ಸಾಮಾನಿಯಾಗಿ(ಸಾಮಾ 'ನ್ಯ' ವಾಗಿ) ಬಳಸುವ 'ಪ್ರಾಣ' ತೆಗೆದುಕೊಳ್ಳಿ, ಅದನ್ನವರು 'ಪಿರಾಣ', ಇಲ್ಲವೇ 'ಪರಾಣ' ಎನ್ನುತ್ತಾರೆ. 'ರಾತ್ರಿ' ಎಂಬುದನ್ನು 'ರಾತರಿ' ಎನ್ನುತ್ತಾರೆ. 'ಚಿತ್ರ' - ಚಿತ್ತಾರ. 'ಸ್ವಚ್ಛ' - ಸೊಚ್ಚ. ಸ್ವಲ್ಪ - ಸೊಲುಪ. ಇಂತಹ ಎಲ್ಲ ಬೆರಕೆ ಪದಗಳು.
ಈಗ ಹೇಳಿ, ಯಾರು ಕಲಿತವರು(ಸುಶಿಕ್ಷಿತರು), ನಾವಾ? ಹಳ್ಳಿಗರಾ?
ಒಂದು ವಿವರಣೆ :- ಬರವಣಿಗೆಯಲ್ಲಿ 'ಬರುತ್ತೀರಾ?' ಎಂದು ನಾವು ಬರೆಯುತ್ತೇವೆ. ಅದನ್ನು ಆಡುವಾಗ 'ಬರ್ತೀರಾ?' ಆಗುತ್ತದೆ. 'ನುಡಿ ಸೊಚ್ಚತೆ ಮತ್ತು ಬರಹದ ಸೊಚ್ಚತೆ' ಬೇರೆ, ಬೇರೆ(OLN ರ 'ಮಡಿ ಭಾಷೆ,ಮಡಿ ಭಾಷೆ' ಬಲಾಗ ನೋಡಿ) ಎಂದು ಹೇಳುವುದನ್ನು, ಈ ಬೆಳಕಿನಲ್ಲಿ ನೋಡಿದಾಗ ಅದು ಸರಿ ಎನ್ನಬಹುದು. 'ಬರುತ್ತಾ' ಎಂಬುದನ್ನು 'ಬರ್ತಾ' ಬರೆದರೆ, ಅದು ತಪ್ಪು, ಏಕೆಂದರೆ, 'ರ್ತಾ' ಇಲ್ಲಿ, ಒತ್ತಕ್ಕರದ ನಿಯಮ ಉಲ್ಲಂಗನೆಯಾಗುತ್ತದೆ.
ಮಹಾಪರಾಣಗಳು ಏಕೆ ಬೇಡ?
ಸಕ್ಕದದಿಂದ ಅತವಾ ಇನ್ನಾವುದೇ ನುಡಿಯಿಂದ ತಂದ ಮಹಾಪರಾಣವಿರುವ ಯಾವುದೇ ಪದ, ಮಹಾಪರಾಣವನ್ನು ಕಳೆದುಕೊಂಡು, ಕನ್ನಡದ್ದಾಗಿದೆ.
ಉದಾ:
೧) 'ಘಂ'ಟೆ - ಗಂಟೆ, 'ಭ'ಕ್ತಿ - ಬಕುತಿ, ಭೂಮಿ - ಬೂಮಿ,ಬುವಿ (ನೆಲ), ಹಲವು.
೨) ಸಂಧರ್ಭ ಸರಿಯೇ, ಸಂದರ್ಭ ಸರಿಯೇ? ಇಂತಹ ತಲೆಬುಡವಿರದ ಕೇಳಿಕೆ(ಪ್ರಶ್ನೆ)ಗಳೇಕೆ ಹುಟ್ಟುತ್ತವೆ? ಸಂಧರ್ಭ, ಸಂದರ್ಭ ಎರಡೂ ತಪ್ಪು, ಸಂದಬ್ಬ ಸರಿಯಾದ ಬಳಕೆ. ಏಕೆಂದರೆ, ' ಒತ್ತಕ್ಕದ ಕಟ್ಟಳೆ '.
೩) ಮಹಾಪರಾಣದ ನಿರ್ ಬಳಕೆಯಿಂದ, ಮಹಾಪರಾಣವಿರುವ ನುಡಿಯಿಂದ ಬಂದ ಪದ, ಸರಳವಾಗಿ, ಮತ್ತು ಬಲು ಬೇಗ ಕನ್ನಡದ ಪದವಾಗಿ ಹೋಗುತ್ತದೆ.
ಶ, ಷ ಗಳನ್ನೂ ಬೇಡವೆಂದು ಹೇಳುತ್ತಿರುವುದು ಇದೇ ಕಾರಣಕ್ಕೆ. ಉದಾ: ಘೋಷಣೆ - ಗೋಸಣೆ.
'ವ' ದ ಒಗಟು
ಕನ್ನಡದಲ್ಲಿ 'ವ' ದಿಂದ ಸುರುವಾಗುವ ಪದಗಳಿಲ್ಲ. 'ವ' ದಿಂದ ಸುರುವಾಗುವ ಪದಗಳೆಲ್ಲವೂ ಹೊರಗಿನವೇ.
ವಿಮಾನ - ಇಮಾನ, ವಿಚಾರ - ಇಚಾರ, ವ್ಯವಸಾಯ - ಬೇಸಾಯ, ವ್ಯಂಜನ - ಬೆಂಜನ, ವ್ಯಾಕರಣ - ಬೇಗರಣ
ವೆಂಕ - ಯಂಕ, ವೇದಿಕೆ - ಯೇದಿಕೆ, ವಿನಯ - ಇನಯ
ಬರವಣಿಗೆಯಲ್ಲಿ 'ವ' ನ್ನು ಬೇರೆ ಅಕ್ಕರದೊಂದಿಗೆ ಬರೆದರೂ ಮಾತನಾಡುವಾಗ ಹೆಚ್ಚಿನ ಬಾರಿ, 'ಒ' ಆಗುವುದು.
ಸ್ವಚ್ಚ - ಸೊಚ್ಚ, ಸ್ವಂತ - ಸೊಂತ, ಸ್ವಲ್ಪ - ಸೊಲುಪ, ಬಹುಸ ಈ ಪದಗಳನ್ನು ಮೊದಲು ಹೀಗೆಯೇ ಬರೆಯುತ್ತಿದ್ದರೇನೋ. ಸಕ್ಕದದ ಬೆನ್ನು ಬಿದ್ದ ಬರಹಗಾರರು, "ಒತ್ತಕ್ಕರದ ಕಟ್ಟಳೆ" ಯನ್ನು ಗಾಳಿಗೆ ತೂರಿದ್ದರಿಂದ ಅವು ಬದಲಾಗಿವೆ.
ಸೊಕ್ಕು,ಸೊನ್ನೆ,ಸೊಲ್ಲು,ಸೊಪ್ಪು,ಸೊಂಡಿಲು,ಸೊಗಸು,ಸೊಗಡು ಈ ಪದಗಳಂತೆಯೇ ಮೇಲೆ ಮಾದರಿಸಿದ ಪದಗಳನ್ನು ಬರೆಯಬೇಕು.
ಯಾವುದೇ ಕನ್ನಡ ಬರಹವನ್ನು ಓದುವಾಗ ನಡುವೆ ಬರುವ ಸಕ್ಕದದ, ಇಲ್ಲವೇ ಬೇರೆ ಯಾವುದೇ ನುಡಿಯ, ಹೆಚ್ಚಿನ ಪದಗಳು ಒತ್ತಕ್ಕರದ ಕಟ್ಟಳೆ ಯನ್ನು ಮೀರುವ ಇಲ್ಲವೇ ವ ದಿಂದ ಸುರುವಾಗುವ ಪದಗಳೇ ಆಗಿವೆ.
ಮೈಸೂರು ಮಲ್ಲಿಗೆ : ಏಕೆ ಮೈಸೂರು ಮಲ್ಲಿಗೆ, ಎಲ್ಲರಿಗೂ ಹಿಡಿಸುವುದು? ಬರೆದು ಏಸು ಕಾಲವಾಗಿದ್ದರೂ ಅದರಲ್ಲಿ ಬರುವ ಹಾಡುಗಳು, ಎಲ್ಲರಿಗೂ ಮನಸ್ಸಿಗೆ ಮುದ ನೀಡುವವು. ಬಳೆಗಾರ ಚೆನ್ನಯ್ಯನ ಹಾಡು ಏನು ಸೊಗಸಾಗಿದೆ!. ಇದನ್ನು ಗಮನಿಸಿದಾಗ, ಇದರಲ್ಲಿ ಸಕ್ಕದದ ಪದಗಳ ಬಳಕೆಯಾಗಲಿ, ಮಹಾಪ್ರಾಣಗಳ ಬಳಕೆಯಾಗಲಿ ಇಲ್ಲವೇ ಇಲ್ಲ, ಇದ್ದರೂ ಅವು ಕನ್ನಡದ ನೇಮಗಳನ್ನು ಪಾಲಿಸುತ್ತವೆ. ಏಕೆಂದರೆ "ಬೆರಕೆ ಪದಗಳು" (ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರ) ಕನ್ನಡ ಹಾಡುಗಳಲ್ಲಿ ಹೊಂದುವದಿಲ್ಲ, ಮಾತನಾಡುವದರಲ್ಲೂ ಹೊಂದುವದಿಲ್ಲ.
ಜಯ ಕರುನಾಡ ತಾಯಿ.

Wednesday, August 09, 2006

ಚಿಲ್ಲರೆಯಾಗುತ್ತಿದ್ದೇನೆ-ಲಲಿತಾ ನಾಯಕ್

ಮಹಾದೇವಿಯಕ್ಕಗಳ ವಚನಗಳು ಎಂಬ ಹೊತ್ತಿಗೆಯಲ್ಲಿ ಈ ಪದ್ಯದ ಸಾಲಗಳನ್ನು ನೋಡಿದೆ,

ಪೈಸೆ ಪೈಸೆಯಾಗಿ ನಾ ವೃದ್ಧಿ ಹೊಂದುತ್ತಲಿದ್ದೆ
ಹತ್ತು-ನೂರರ ಮೊತ್ತವಾಗದಿದ್ದರೂ ಕೊನೆಗೆ
ರೂಪಾಯಿ ನೋಟಾದರೂ ಆಗುತ್ತಿದ್ದೆ
ಆದರೇನು ಗೆಳೆಯಾ, ತಾಳಿ ಕಟ್ಟಿದ ಕ್ಷಣದಿಂದಲೇ
ನೀ ನನ್ನ ಚಿಲ್ಲರೆಯಾಗಿಸಿಬಿಟ್ಟೆ!
ನನ್ನ ಬುದ್ಧಿ - ಕೌಶಲ - ಪ್ರಿತಿಭೆಗಳೇನಿದ್ದರೂ
ನಿನ್ನ ಹೊಟ್ಟೆ ನೆತ್ತಿ ಜೋಪಾನ ಮಾಡುವಷ್ಟಕ್ಕೆ
ನನ್ನ ಅಂಗಾಂಗಗಳು ನಿನ್ನ ಇಂದ್ರಿಯಗಳಿಗೆ
ಸ್ಪೂರ್ತಿ - ಚೇತನ, ಖುಷಿ ನೀಡುವಷ್ಟಕ್ಕೆ
ಸೀಮಿತವೆಂದು ನಿರ್ಣಯಿಸಿರುವ ನಿನ್ನ
ಶತಮಾನಗಳ ಗೊಡ್ಡು ನಂಬಿಕೆಗೆ
"ದಿಕ್ಕಾರ"ಕ್ಕಿಂತ ಮಿಗಿಲಾದ
ಶಕ್ತಿಯುತ ಶಬ್ದಕ್ಕಾಗಿ ಹುಡುಕುತ್ತಿದ್ದೇನೆ!
ಹಾಲುಣಿಸಿ ತಣಿಸುವ ನನ್ನ
ಜೀವಪೋಷಕ ಮೊಲೆಗಳಿಗಿಂತಲೂ
ಕತ್ತರಿಗೆ ಸಿಕ್ಕಿ ಕಸವಾಗಿ ಬಿಡಬಹುದಾದ
ನಿನ್ನ ಗಡ್ಡ ಮೀಸೆಗಳೇ ಮಿಗಿಲೆಂದು
ಬೀಗುವ ನಿನ್ನ ಮೂರ್ಖತನಕ್ಕೆ ಅಚ್ಚರಿಗೊಳ್ಳುತ್ತಿದ್ದೇನೆ
'ತಂದೆತನ' ನಿನ್ನ ಬದುಕಿನ ಒಂದಶ ಮಾತ್ರವಾದರೆ
ಆ ಮಾತು ಅನ್ವಯಿಸುವುದು ನನ್ನ 'ತಾಯ್ತಕ್ಕೂ'
ಎಂಬ ಕಿವಿಮಾತೊಂದ ಹೇಳಲು
ಸಮಯ ಕಾಯುತ್ತಿದ್ದೇನೆ.
--ಲಲಿತಾ ನಾಯಕ್

ಕನ್ನಡ ಭಾವಗೀತೆಗಳ ಲೋಕ

ಕನ್ನಡ ಭಾವಗೀತೆಗಳ ಲೋಕ ನಿಜವಾಗಿ ರಮ್ಯವಾಗಿದೆ. ಸಿ.ಅಶ್ವತ್‍ರ ಹಾಡುಗಳನ್ನು ಕೇಳಲು ನಿಜವಾಗಿಯೂ ಆನಂದವಾಗುತ್ತದೆ. ಇಂದೇ ಅಶ್ವತ್‍ರ ಅಲ್ಬಮ್‍ವೊಂದನ್ನು ಕೊಳ್ಳಿ, ಕೇಳಿ ಆನಂದಿಸಿ, ಕನ್ನಡ ಭಾವಗೀತೆಗಳ ಲೋಕಕ್ಕೆ ಸ್ವಾಗತ. ಇದರಲ್ಲಿಯ ಒಳ್ಳೊಳ್ಳೆ ಗೀತೆಗಳನ್ನು ಮತ್ತು ಹಾಡುಗಾರರನ್ನು ನಮ್ಮ ಚಿತ್ರರಂಗ ಏಕೆ ಬಳಸಿಕೊಳ್ಳಬಾರದು? ಇದರಿಂದ ಭಾವಗೀತೆಗಳಿಗೆ ಹೆಚ್ಚಿನ ಪ್ರಚಾರ ದೊರೆಯುವುದಲ್ಲದೆ, ಹಿನ್ನೆಲೆ ಸಂಗೀತ ಮೇಳದಲ್ಲಿ ಗಿಟಾರ್ ಇತ್ಯಾದಿಯಂತಹ ಅಧುನಿಕ ವಾದ್ಯಗಳನ್ನು ಬಳಸುವದರಿಂದ ಹಾಡು ಹೆಚ್ಚು 'ತಾಂತ್ರಿಕವಾಗಿ' ಸಮೃದ್ಧವಾಗತ್ತೆ. ಹಿಂದಿಯಲ್ಲಿ ಗಜಲ್‍ಗಳನ್ನು ಬಳಸಿಕೊಳ್ಳುತಾರಲ್ಲ, ಹಾಗೆ.