Thursday, April 24, 2014

ಪೆಟ್ರೋಲ್/ಡಿಸೇಲ್‍ಗೆ ಹೇಳಿ ಕೊನೆಯ ನಮಸ್ಕಾರ - ಹೈಡ್ರೋಜನ್

ಪೆಟ್ರೋಲ್, ಡೀಸೆಲ್‍ನಂತ ಪೆಟ್ರೋಲಿಯಮ್ ಉರುವಲು ಹಾಗು ಇತರ ಹುಗಿದು ಹೋದ ಉರುವಲು(fossil fuel)ಗಳು ನಮ್ಮ ಬೂಮಿಯ ಬಿಸಿ ಇಪ್ಪತ್ತನೆ ಶತಮಾನದಲ್ಲಿ ಸತತ ಏರಿರುವದಕ್ಕೆ ಕಾರಣವಾಗಿವೆ. ಇಂದಿನ ದಿನಗಳಲ್ಲಿ ಇವಕ್ಕೆ ಪರ್ಯಾಯ ದಾರಿಗಳು ಎಲೆಕ್ಟ್ರಿಕ್ ಮತ್ತು ಹೈಡ್ರೋಜನ್ ಕಾರುಗಳು, ಯಾಕೆಂದರೆ ಇವು ಗಾಳಿಯನ್ನು ಕೊಳೆ ಮಾಡುವದಿಲ್ಲ, ಮತ್ತು ಪೆಟ್ರೋಲಿಯಮ್ ಉರುವಲಿನ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವದರಿಂದ, ಸೂರ್ಯಶಕ್ತಿ ಬಳಸಿ ಇವನ್ನು(ಕರೆಂಟ್ ಮತ್ತು ಹೈಡ್ರೋಜನ್) ನಾವು ಮಾಡಿಕೊಳ್ಳಬಹುದು.
ನಾನು ಇಲ್ಲಿ ಮುಕ್ಯವಾಗಿ ಹೈಡ್ರೋಜನ್ ಕಾರಿನ ಬಗ್ಗೆ ಹೇಳಬೇಕೆಂದಿದ್ದೇನೆ. ಇವುಗಳಲ್ಲಿ ಎರಡು ಬಗೆ, ೧) ಹೈಡ್ರೋಜನ್ ಇಂಟರ್ನಲ್ ಕಂಬಶ್ಚನ್ ಎಂಜಿನ್ ೨) ಹೈಡ್ರೋಜನ್ ಫ್ಯುಎಲ್ ಸೆಲ್ ಎಂಜಿನ್
ನನ್ನ ಒಲವಿರುವದು ಹೈಡ್ರೋಜನ್ ಇಂಟರ್ನಲ್ ಕಂಬಶ್ಚನ್ ಎಂಜಿನ್ ಬಗ್ಗೆ, ಯಾಕೆಂದರೆ ಇದಕ್ಕೆ ನಮ್ಮ ಇರುವ ಕಾರನ್ನೇ ಬದಲಾವಣೆ ಮಾಡಿಕೊಳ್ಳಬಹುದು, ಎರಡನೇ ಬಗೆಯದು ಎಲೆಕ್ಟ್ರಿಕ್ ಕಾರೇ ಆಗಿದೆ, ಆದರೆ ಹೈಡ್ರೋಜನ್ ಉರಿದು ಬ್ಯಾಟರಿಯನ್ನು ತುಂಬಿಸುತ್ತದೆ, ಬ್ಯಾಟರಿಯಿಂದ ಕಾರು ಓಡುತ್ತದೆ. ಎಲೆಕ್ಟ್ರಿಕ್ ಕಾರು ಅಥವಾ ಹೈಡ್ರೋಜನ್ ಫ್ಯುಎಲ್ ಸೆಲ್ ಕಾರುಗಳು ಮೊದಲನೆಯದಾಗಿ ತುಟ್ಟಿ, ಎರಡನೇಯದು ಇವುಗಳ ಬ್ಯಾಟರಿಯನ್ನು ಪ್ರತಿ ಮೂರರಿಂದ ಐದು ವರ್ಶಕ್ಕೆ ಬದಲಿಸಬೇಕು. ಹಾಗಾಗಿ ಇವು ಹುಗಿದೋದ ಉರುವಲು ಕಾರಿನಿಂದ ಮುಕ್ತಿ ಕೊಟ್ಟರೂ ತೆರುವ ಬೆಲೆ ಅವಕ್ಕಿಂದ ಹೆಚ್ಚು, ಹಾಗಾಗಿ ಅವು ಪರಿಸರ ಕಾಳಜಿಗೆ ಹೆಚ್ಚಿನ ಹಣ ತೆರಬೇಕು ಎಂಬ ಅನಿಸಿಕೆ ಹುಟ್ಟಿಸುತ್ತವೆ.
ಹೈಡ್ರೋಜನ್ ಒಂದು ಗ್ಯಾಸ್, ಇದು ಗಾಳಿಗಿಂತ ಹಗುರ, ಹೊರಬಾನುವಿನೆಲ್ಲೆಡೆ ಅತೀ ಹೆಚ್ಚು ದೊರಕುವ ವಸ್ತು ಹೈಡ್ರೋಜನ್, ಹಾಗಾಗಿ ರಾಕೇಟುಗಳಲ್ಲಿ ಹೈಡ್ರೋಜನ್ ಬಳಕೆ ಹೆಚ್ಚಾಗಿ ಕಂಡು ಬರುತ್ತದೆ. ನಮ್ಮ ರೆಗುಲರ್ ಪೆಟ್ರೋಲ್/ಡಿಸೇಲ್ ಕಾರುಗಳಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ಹೈಡ್ರೋಜನ್ ಉರಿದು ಓಡಿಸಬಹುದು, ಆದರೆ ಹೈಡ್ರೋಜನ್ ಬಲು ಬೇಗ ಉರಿದು ಹೋಗುವದರಿಂದ, ಹೆಚ್ಚು ಉರುವಲು ಬೇಕಾಗುತ್ತದೆ.
ಈ ನಿಟ್ಟಿನಲ್ಲಿ ಕೆಲ ಸಂಶೋದನೆಗಳಾಗಿದ್ದು, ಒಂದು ಅಂದಾಜು ಲೆಕ್ಕ ಕೊಡುವದಾದರೆ, ಮಹಿಂದ್ರ ರವರ delhy 3w (http://www.iitd.ac.in/content/hydrogen-powered-three-wheeler) ಎಂಬ ರಿಕ್ಶಾ ಒಂದು ಕಿಲೋ ಹೈಡ್ರೋಜನ್ ಗೆ ೮೫ ಕಿ.ಮಿ ಓಡುತ್ತದೆ. ಅಂದರೆ ಕೊಂಚ ಲೇಟೆಸ್ಟ್ ತಂತ್ರಜ್ನಾನ ಬಳಸಿದರೆ ಸಾಮಾನ್ಯ ಕಾರು 60 km/kg ಹೈಡ್ರೋಜನ್ ಮೈಲೇಜ್ ಕೊಡಲಿದೆ ಅಂತ ಇಟ್ಟುಕೊಳ್ಳಬಹುದು. ಇದು ಸರಾಸರಿ ಒಂದು ದಿನಕ್ಕೆ 60 ಕಿ.ಮಿ ಓಡಿಸುತ್ತೇವೆ ಅಂತ ಇಟ್ಟುಕೊಳ್ಳೋಣ. ಅಂದರೆ ಹೆಚ್ಚು ಕಮ್ಮಿ ಒಂದು ಕಿಲೋ ಹೈಡ್ರೋಜನ್ ಒಂದು ದಿನಕ್ಕೆ ಬೇಕು.

ಇನ್ನು ದಿನವೊಂದಕ್ಕೆ ಒಂದು ಕಿಲೋ ಹೈಡ್ರೋಜನ್ ತಾಯಾರಿಸುವದರ ಬಗ್ಗೆ ಮಾಹಿತಿ ಕಲೆ ಹಾಕುವದೊಂದು ಹರ ಸಾಹಸವಾಗಿತ್ತು. ಎಲೆಕ್ಟ್ರೋಲಿಸಿಸ್ ಸರಳ ವಿಧಾನವಾಗಿದೆ. ಉಪ್ಪಿನ ನೀರಿನಲ್ಲಿ ಎರಡು ಪ್ಲೇಟ್‍ಗಳನ್ನು ಬಿಟ್ಟು, ಒಂದಕ್ಕೆ ಪೊಸಿಟೀವ್ ಮತ್ತೊಂದಕ್ಕೆ ನಿಗೆಟಿವ್ ವೈರ್ ಜೋಡಿಸಿದರೆ, ಆ ನೀರಿನ ಮೇಲೆ ಗುಳ್ಳೆಯ ರೂಪದಕ್ಕೆ ಹೈಡ್ರೋಜನ್ ಸೇಖರಣೆಗೊಳ್ಳುತ್ತದೆ. ಆದರೆ ಈ ವಿಧಾನ ತುಂಬ ತುಟ್ಟಿ, ಎಸ್ಟು ತುಟ್ಟಿಯೆಂದರೆ ೧ ಕಿಲೋ ಹೈಡ್ರೋಜನ್ ತಯಾರಿಕೆಗೆ ಸುಮಾರು ಎಪ್ಪತ್ತೆರಡು ಸಾವಿರ ಯುನಿಟ್ ಕರೆಂಟ್ ಬೇಕು!! (https://in.answers.yahoo.com/question/index?qid=20110903031603AAqL6sV)

ಸರಳ ಮತ್ತು ಅಗ್ಗ ವಿದಾನ ನಾನು ಕಂಡುಕೊಂಡಿದ್ದೆಂದರೆ, ಸೋಲಾರ್ ಥರ್ಮೊಲಿಸಿಸ್‍(solar thermolysis) ನ ಮೂಲಕ, ಸೋಲಾರ್ ಒಗ್ಗೂಡಕ(solar concentrator - ಹಿಮ್ಮೊಗ ಮಾಡಿದ ಚತ್ರಿಯಾಕಾರದ ಕನ್ನಡಿಗಳು ಸೌರಶಕ್ತಿಯನ್ನು ಒಂದೆಡೆ ಸೇರಿಸುತ್ತವೆ) ಬಳಸಿ ನೀರನ್ನು ೨ ಸಾವಿರ ಡಿಗ್ರಿಗಿಂತಲೂ ಹೆಚ್ಚು ಬಿಸಿಗೆ ಏರಿಸಿದಾಗ, ನೀರು, ಹೈಡ್ರೋಜನ್ ಮತ್ತು ಆಕ್ಸಿಜೆನ್ ಆಗಿ ಒಡೆಯುತ್ತದೆ. ಇದರಿಂದ ಒಂದು ಗಂಟೆಗೆ ಒಂದು ಕಿಲೋ ಹೈಡ್ರೋಜನ್ ತಯಾರಿಸಬಹುದೆಂದು ಇಲ್ಲಿ ಹೇಳಲಾಗಿದೆ http://en.wikipedia.org/wiki/Water_splitting#Solar-thermal, ಆದರೆ ೧೦೦ meter square ಸೋಲಾರ್ ಒಗ್ಗೂಡಕ ನಿಮ್ಮ 30*40 ಮನೆಯ ಜಾಗ ಹಿಡಿಯುತ್ತದೆ, ಹಾಗಾಗಿ ಇದರ ನಾಕು ಪಟ್ಟು ಚಿಕ್ಕ ೨೫ ಮೀಟರ್ ಸ್ಕ್ವೇರ್ ಸೋಲಾರ್ ಒಗ್ಗೂಡಕ ನಾಲ್ಕರಿಂದ ಐದು ಗಂಟೆಯಲ್ಲಿ ೧ ಕಿಲೋ ಹೈಡ್ರೋಜನ್ ನೀಡಬೇಕು(ನನ್ನ ಗಣಿತ ಸರಿ ಇದ್ದಲ್ಲಿ). ಇಂತ ೨೫ sqmt ಸೋಲಾರ್ ಒಗ್ಗೂಡಕವನ್ನು ಕೂರಿಸಲು ಸುಮಾರು ೪ ಲಕ್ಶ ಹಣ ತಗುಲಬಹುದು.